ಭಾಸ್ಕರವರ್ಮ
ಕ್ರಿ..ಶ. 4ನೆಯ ಶತಮಾನದಲ್ಲಿ ಪುಷ್ಯವರ್ಮನಿಂದ ಸ್ಥಾಪಿತವಾದ ರಾಜವಂಶದ ಕೊನೆಯ ಅರಸ. ಸುಮಾರು 600ರಿಂದ 650ರ ತನಕ ಕಾಮ ರೂಪವನ್ನು (ಅಸ್ಸಾಮ್) ಪ್ರಾಗ್ಜೋತಿಷಪುರದಿಂದ ಆಳಿದ. ಬಾಣನ ಹರ್ಷ ಚರಿತ ಮತ್ತು ಹ್ಯೂಯೆನ್‍ತ್ಸಾಂಗನ ಪ್ರವಾಸ ಕುರಿತ ಬರೆಹದಲ್ಲಿ ಈತನನ್ನು ಕುಮಾರನೆಂದು ಉಲ್ಲೇಖಿಸಲಾಗಿದೆ. ತಂದೆ ಸುಸ್ಥಿತಿವರ್ಮ, ತಾಯಿ ಶ್ಯಾಮಾದೇವಿ. ತಂದೆಯ ಮರಣಾನಂತರ ಇವನ ಅಣ್ಣ ಸುಪ್ರತಿಷ್ಠಿತವರ್ಮ ಅಧಿಕಾರಕ್ಕೆ ಬಂದನೆಂದೂ ಆತ ಅತ್ಯಲ್ಪಕಾಲ ಮಾತ್ರ ರಾಜ್ಯವಾಳಿದುದಾಗಿಯೂ ಅಣ್ಣ ತಮ್ಮಂದಿರಿಬ್ಬರೂ ಗೌಡ ಸೈನ್ಯದ ವಿರುದ್ದ ಹೋರಾಡಿದರೆಂದೂ ತಿಳಿದು ಬಂದಿದೆ.

	ಭಾಸ್ಕರವರ್ಮ ಹರ್ಷನ ಸಮಕಾಲೀನ ಮತ್ತು ಅವನ ಮಿತ್ರನಾಗಿದ್ದ. 648ರಲ್ಲಿ ಮರಣಾನಂತರ ಈತನ ರಾಜ್ಯ ಬಂಗಾಳದವರೆಗೆ ವ್ಯಾಪಿಸಿತು. ಪ್ರಸಿಧ್ದ ನಿಧಾನ್‍ಪುರ್ ತಾಮ್ರಶಾಸನದ ಪ್ರಕಾರ ಇವನ ರಾಜ್ಯ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯವರೆಗೆ ವಿಸ್ತರಿಸಿತ್ತೆಂದು ತಿಳಿದು ಬರುತ್ತದೆ.

	ಭಾಸ್ಕರವರ್ಮ ಹಿಂದೂ ವೈಷ್ಣವ ವಂಶದವನಾಗಿದ್ದರೂ ಶೈವಾರಾಧಕನಾಗಿದ್ದ ಹಾಗೂ ಇತರ ಧರ್ಮಗಳಿಗೆ ಪೋಷಣೆ ನೀಡಿದ. ಚೀನಿ ಯಾತ್ರಿಕ ಹ್ಯೂಯೆನ್‍ತ್ಸಾಂಗನನ್ನು ತನ್ನ ಆಸ್ಥಾನಕ್ಕೆ ಗೌರವಾದರಗಳಿಂದ ಬರಮಾಡಿಕೊಂಡ. 643ರಲ್ಲಿ ಕನ್ಯಾಕುಬ್ಜದಲ್ಲಿ ಹ್ಯೂಯನ್‍ತ್ಸಾಂಗನ ಅಧ್ಯಕ್ಷತೆಯಲ್ಲಿ ನಡೆದ ಮಹಾಬೌದ್ಧ ಸಮ್ಮೇಳನದಲ್ಲೂ ಈತ ಭಾಗವಹಿಸಿದ್ದ.

	ಹರ್ಷನ ಮರಣಾನಂತರ ಸಿಂಹಾಸನವನ್ನು ವಶಪಡಿಸಿಕೊಂಡ ಅರ್ಜುನ ಅಥವಾ ಅರುಣಾಶ್ವನ ಮೇಲೆ ಬೇರೊಂದು ಕಾರಣಕ್ಕಾಗಿ ವಾಂಗ್ ಹ್ಯೂಯನ್‍ತ್ಸೆ ಎಂಬ ಚೀನಿ ರಾಯಭಾರಿ ಹೋರಾಡುವಾಗ ಅವನಿಗೆ ಈತ ನೆರವನ್ನು ನೀಡಿದ. ಚೀನಿ ಸಂಸ್ಕøತಿಯಲ್ಲಿ ಈತನಿಗೆ ಅತೀವ ಆಸಕ್ತಿಯಿದ್ದು ಲಾವೊತ್ಸುವಿನ ಚಿತ್ರವನ್ನು ಮತ್ತು ತಾವೊ-ತೆ-ಚಿಂಗ್ ಎಂಬ ಕೃತಿಯನ್ನು ಬರೆಯಿಸಿದ್ದನೆಂದು ತಿಳಿದು ಬರುವುದು.

	ಸುಮಾರು 650ರಲ್ಲಿ ಮಡಿದ. ಈತನಿಗೆ ಮಕ್ಕಳಿರಲಿಲ್ಲ. ಈತನ ತರುವಾಯ ರಾಜ್ಯ ಹೊಸ ಸಾಲಸ್ತಂಭ ವಂಶಕ್ಕೆ ಸೇರಿತು. 											
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ